ಇರಿವ ಬೆಡಂಗ ಸತ್ಯಾಶ್ರಯ:--
ಆಳ್ವಿಕೆ 907-1008. ಕಲ್ಯಾಣಿಯ ಚಾಲುಕ್ಯ ಮನೆತನದ ಅರಸರಲ್ಲೊಬ್ಬ. ಕರ್ಣಾಟಕ ಚರಿತ್ರೆಯಲ್ಲಿ ಪ್ರಸಿದ್ಧನಾದ ಈತನಿಗೆ ಇರಿವ ಬೆಡಂಗನೆಂಬ ಬಿರುದಿತ್ತು. ಯುದ್ಧದಲ್ಲಿ ಇರಿದು ಕೊಲ್ಲುವ ಕೆಲಸದಲ್ಲಿ ಬೆಡಗನ್ನುಳ್ಳವನು ಎಂಬುದು ಈ ಬಿರುದಿನ ಅರ್ಥ. ಈತ ಆಹವಮಲ್ಲ ತೈಲಪ (ಇಮ್ಮಡಿ ತೈಲಪ) ಮತ್ತು ರಾಷ್ಟ್ರಕೂಟ ರಾಜಪುತ್ರಿಯಾದ ಜಾಕವ್ವೆಯರ (ಜಕ್ಕಲಾದೇವಿ, ಜಕ್ಕಲ ಮಹಾದೇವಿ) ಮೊದಲ ಮಗ, ದಶವರ್ಮ (ಯಶೋವರ್ಮ) ಈತನ ತಮ್ಮ. ಮಹಾದೇವಿ ಮಗಳು. (ಈಕೆಯನ್ನು ನೊಳಂಬ ಪಲ್ಲವರ ನಾಯಕನಾದ ಇವ ನೊಳಂಬಾಧಿರಾಜನಿಗೆ ಕೊಟ್ಟು ಮದುವೆಯಾಗಿತ್ತು). ಸತ್ತಿಗ, ಸತ್ತಿಮ ಎಂಬುವುದು ಸತ್ಯಾಶ್ರಯನ ಉಪನಾಮಗಳು. ಅಕಳಂಕಚರಿತ, ಅಮ್ಮನ ಗಂಧವಾರಣ, ಕುಮರಾಂಕ ರಾಮ, ಸಾಹಸಾಂಕ-ಎಂಬುವು ಈತನ ಇತರ ಕೆಲವು ಬಿರುದುಗಳು.

ತಂದೆಯ ರಾಜ್ಯಭಾರ ಕಾಲದಲ್ಲಿಯೇ ಯುವರಾಜ ಸತ್ಯಾಶ್ರಯ ಆತನ ಅನುಜ್ಞೆಯಂತೆ ಕೊಂಕಣದ ಶಿಲಾಹಾರರ ಮೇಲೆ ಮತ್ತು ಇನ್ನೂ ಉತ್ತರದಲ್ಲಿಯ ಗುರ್ಜರರ ಮೇಲೆ ಹೋರಾಡಿದ. ಕೊಂಕಣೇಶ್ವರನಾದ ಅಪರಾದಿತ್ಯನ ಮೇಲೆ ಈತ ಸಾಧಿಸಿದ ವಿಜಯವನ್ನು ರನ್ನಕವಿ ಸಾಹಸಭೀಮವಿಜಯವೆಂಬ (ಗದಾಯುದ್ಧ) ತನ್ನ ಕಾವ್ಯದಲ್ಲಿ ಸ್ವಾರಸ್ಯವಾಗಿಯೂ ವಿಶದವಾಗಿಯೂ ವರ್ಣಿಸಿದ್ದಾನೆ. ಈ ವರ್ಣನೆ ಅಪರಾದಿತ್ಯನ (ಅಪರಾಜಿತನ) ಕ್ರಿ.ಶ. 997ರ ಭದನದ ಶಾಸನದಲ್ಲಿ ಉಕ್ತವಾಗಿರುವ ಸಂಗತಿಗಳಿಗೆ ಪೋಷಕವಾಗಿದೆ.

ಆಹವಮಲ್ಲ ತೈಲಪ ಕಲ್ಯಾಣಿಯ ಚಾಲುಕ್ಯ ಸಿಂಹಾಸನದ ಮೇಲೆ 24 ವರ್ಷಗಳ ಕಾಲ ರಾಜ್ಯವಾಳಿದ ಮೇಲೆ (ಕ್ರಿ.ಶ. 973-997) ಸತ್ಯಾಶ್ರಯ ಪ್ರಾಯಶಃ 997ರಲ್ಲಿ ಅಥವಾ ಆ ಕೂಡಲೇ ಪಟ್ಟಕ್ಕೆ ಬಂದು 1008ರವರೆಗೆ ರಾಜ್ಯವಾಳಿದ. ಈತ ಆಳುತ್ತಿದ್ದ ಪ್ರದೇಶ ರಟ್ಟಪಾಡಿಯೆನ್ನಿಸಿದ್ದು, ರಾಜಧಾನಿ ಮಾನ್ಯಖೇಟವಾಗಿತ್ತು. ಈತ ತನ್ನ ತಂದೆಯ ಆಳ್ವಿಕೆಯ ಸೀಮೆಗೆಲ್ಲ ಒಡೆಯನಾದುದೇ ಅಲ್ಲದೆ ತನ್ನದೇ ಆದ ನೀತಿಯನ್ನು ಮುಂದುವರಿಸಿದ.

ಸತ್ಯಾಶ್ರಯಚಾಲುಕ್ಯ ಚಕ್ರವರ್ತಿಯಾದ ಸಮಯದಲ್ಲಿ ಕರ್ಣಾಟಕಕ್ಕೆ ಚೋಳರ ಆಕ್ರಮಣ ಭಯವಿದ್ದಿತು. ಅವರು ಒಂದನೆಯ ರಾಜರಾಜನ ನೇತೃತ್ವದಲ್ಲಿ ದಕ್ಷಿಣ ಭಾರತವನ್ನೆಲ್ಲ ವ್ಯಾಪಿಸಿತೊಡಗಿದ್ದು, ತಮ್ಮ ಅಧಿಕಾರವನ್ನು ಆಂಧ್ರದೇಶದೊಳಕ್ಕೂ ಕೂಡ ಹರಡಲು ಸಿದ್ಧರಾಗುತ್ತಿದ್ದರು. ಕರ್ಣಾಟಕದ ದಕ್ಷಿಣ ಮತ್ತು ಪೂರ್ವಭಾಗಗಳ ಗಡಿಗಳಲ್ಲಿ ಅವರು ಮೇಲೇರಿ ಬರುವುದನ್ನು ತಡೆಗಟ್ಟುವುದು ಅನಿವಾರ್ಯವಾಯಿತು. ಇದಕ್ಕೆ ಅನುಕೂಲವಾಗುವಂತೆ ಸತ್ಯಾಶ್ರಯ ವೆಂಗಿರಾಜ್ಯದ ಕಡೆಗೆ ಸೈನ್ಯದೊಡನೆ ತೆರಳಿ ಹೋರಾಟಕ್ಕೆ ಮಧ್ಯಕ್ಷೇತ್ರವಾಗುವಂತಿದ್ದ ಶ್ರೀಪರ್ವತದಲ್ಲಿ ಬೀಡು ಬಿಟ್ಟನೆಂದೂ ಪ್ರತಿಕ್ರಮವಾಗಿ ಚೋಳರ ರಾಜರಾಜ ಯುವರಾಜನಾದ ರಾಜೇಂದ್ರನ ಕೈಕೆಳಗೆ ಪ್ರಬಲ ಸೈನ್ಯವನ್ನು ಕೊಟ್ಟು ಚಾಲುಕ್ಯರ ಸ್ವಂತ ನೆಲೆಯನ್ನು ಮುತ್ತಲೆಂದು ಕಳಿಸಿಕೊಟ್ಟನೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಇದಕ್ಕೆ ಮೊದಲು ರಾಜರಾಜನೊಡನೆ ಸತ್ಯಾಶ್ರಯ ಹೋರಾಡಿದ ವಿಷಯ ರಾಜರಾಜನ ಶಾಸನಗಳಿಂದಲೇ ತಿಳಿಯುತ್ತದೆ. ಚೋಳರ ಸೈನ್ಯ ಗಡಿದಾಟಿ ಬಂದು ದೊನವೂರಿನಲ್ಲಿ (ಬಿಜಾಪುರ ಜಿಲ್ಲೆಯ ದೊನೂರು) ಬೀಡುಬಿಟ್ಟು ಚಾಲುಕ್ಯ ರಾಜ್ಯವನ್ನು ಲೂಟಿ ಮಾಡಿತೆಂದೂ ಸತ್ಯಾಶ್ರಯ ಆ ಪಡೆಯನ್ನು ಸದೆಬಡಿದು ಹಿಂದಟ್ಟಿದನೆಂದೂ ಹೊಟ್ಟೂರು ಶಾಸನದಲ್ಲಿ (1077-1008) ಬಂದಿದೆ. ಈ ಯುದ್ಧ 1077-1008 ರಲ್ಲಿ ತಾವರೆಯ ಘಟ್ಟ ಎಂಬ ಸ್ಥಳದಲ್ಲಿ ಪ್ರಾಯಶಃ ನಡೆದಿರಬೇಕೆಂದು ಕೆಲವರು ತಿಳಿದಿದ್ದಾರೆ. ಅಂತೂ ಈ ಯುದ್ಧ ಚಾಲುಕ್ಯರಿಗೆ ಸತ್ತ್ವಪರೀಕ್ಷೆಯನ್ನು ಒಡ್ಡಿತೆಂದು ಹೇಳಬಹುದು.

	ಇರವ ಬೆಡಂಗನ ಆಳ್ವಿಕೆಯ ಕಾಲದಲ್ಲಿ ಆತನ ತಂದೆಯ ಕಾಲದಲ್ಲಿ ಸಾಮಂತರಾಗಿದ್ದವರೇ ಸಾಮಂತರಾಗಿದ್ದರು. ಇವರಲ್ಲಿ ಬೆಳ್ವಲ, ಪುಲಿಗೆರೆ, ಕುಂದೂರು, ಕುಕ್ಕನೂರು ಈ ಪ್ರಾಂತ್ಯಗಳನ್ನು ಶೋಭನರಸ ನೋಡಿಕೊಳ್ಳುತ್ತಿದ್ದ. ತೈಲಪನ ಅಂಕಕಾರನೆನಿಸಿದ ಭೀಮರಾಜ ಬನವಾಸಿ. ಸಾಂತಲಿಗೆ, ಕಿಸುಕಾಡುನಾಡುಗಳನ್ನು ನೋಡಿಕೊಳ್ಳುತ್ತಿದ್ದ. ದಕ್ಷಿಣ ಶಾಖೆಯ ಶಿಲಾಹಾರರ ಮಾಂಡಲಿಕ ರಟ್ಟರಾಜ ಕೊಂಕಣವನ್ನಾಳುತ್ತಿದ್ದ. ಈಚಿನ ಚಾಲುಕ್ಯ ಚಕ್ರವರ್ತಿಗಳ ಶಾಸನಗಳಲ್ಲಿ ಬನವಾಸಿ ಸಾಚಿತಲಿಗೆ ನಾಡುಗಳ ಒಡೆಯನೆಂಬುದಾಗಿ ಉಕ್ತವಾಗಿರುವ ಕುಂದುಮರಸನೆಂಬುವನನ್ನು ಇರವ ಬೆಡಂಗನ ಮಗನೆಂದೂ ತಿಗುಳರ ಮಾರಿಯೆಂದೂ ಕರೆದಿರುವುದು ಕಾಣುತ್ತದೆ. ಇಲ್ಲಿ ಮಗನೆಂಬ ಮಾತು ಆತ ಚಕ್ರವರ್ತಿಗೆ ಅಚ್ಚುಮೆಚ್ಚಿನ ಸ್ವಾಮಿಭಕ್ತನಾಗಿದ್ದನೆಂಬುದನ್ನೂ ತಿಗುಳರ ಮಾರಿಯೆಂಬ ಮಾತು ಆತ ಚಕ್ರವರ್ತಿಗೆ ಚೋಳರ ಆಕ್ರಮಣ ಕಾಲದಲ್ಲಿ ಬಹಳವಾಗಿ ಸಹಾಯ ಮಾಡಿದನೆಂಬುದನ್ನೂ ಸೂಚಿಸುತ್ತವೆ.

ಆಹವಮಲ್ಲ ತೈಲಪನ ಆಸ್ಥಾನದಲ್ಲಿ ಕವಿಚಕ್ರವರ್ತಿಯಾಗಿದ್ದ ರನ್ನ ಬರೆದಿರುವ ಸಾಹಸಭೀಮವಿಜಯವೆಂಬ (ಗದಾಯುದ್ಧ) ಕಾವ್ಯ ಇರವ ಬೆಡಂಗ ಸತ್ಯಾಶ್ರಯನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಗೊಳಿಸಿದೆ. ಪಂಪಕವಿ ಆತನ ಆಶ್ರಯದಾತೃವಾದ ಅರಿಕೇಸರಿಯನ್ನು ಭಾರತದ ಅರ್ಜುನನೊಡನೆ ಅಭೇದ ಭಾವದಿಂದ ಕಂಡು ಅರಿಕೇಸರಿಯ ಹೆಸರು ಅಚಂದ್ರಾರ್ಕವಾಗಿ ನಿಲ್ಲುವ ಹಾಗೆ ವಿಕ್ರಮಾರ್ಜುನವಿಜಯವನ್ನು ರಚಿಸಿರುವಂತೆ ರನ್ನಕವಿ ಸತ್ಯಾಶ್ರಯನನ್ನು ಭೀಮನೊಡನೆ ಅಭೇದಭಾವದಿಂದ ಕಂಡು ಸಾಹಸಭೀಮವಿಜಯವನ್ನು ರಚಿಸಿದ್ದಾನೆ. ಸತ್ಯಾಶ್ರಯನ ಗುಣವಿಶೇಷಗಳನ್ನೂ ಯುವರಾಜನಾಗಿದ್ದಾಗ ಭಾಗವಹಿಸಿದ ಕೆಲವು ಯುದ್ಧೋದ್ಯಮಗಳಲ್ಲಿ ಮೆರೆದ ಶೌರ್ಯಸ್ಥೈರ್ಯಗಳನ್ನೂ ಮೆಚ್ಚಿಕೊಂಡು ಇರವ ಬೆಡಂಗನ ಸಾಹಸಗಳೂ ಭಾರತ ಕಥೆಯ ಗದಾಯುದ್ಧ ಭಾಗದಲ್ಲಿ ಬರುವ ಭೀಮಸೇನನ ಸಾಹಸಗಳೂ ಒಂದರೊಡನೆ ಒಂದು ಹೊಂದಿಕೊಳ್ಳುವ ಹಾಗೆ ತನ್ನ ಈ ಚಾರಿತ್ರಿಕ ಧ್ವನಿಕಾವ್ಯವನ್ನು ಕವಿ ಕಟ್ಟಿರುವನೆಂದು ಹೇಳಬಹುದು. ಇಲ್ಲಿ ಸತ್ಯಾಶ್ರಯನೇ ಕಥಾನಾಯಕನಾಗಿರುವುದರಿಂದ ಆತನ ಅನ್ವಯಾಗತ ಚರಿತ್ರೆಯೂ ವಿಜಯೋದ್ಯಮಗಳೂ ಗುಣವಿಶೇಷಗಳೂ ಬಿರುದುಗಳೂ ಭೀಮಸೇನನಿಗೆ ಆರೋಪಿತವಾಗಿವೆ. ಚಾಲುಕ್ಯವಂಶದ ಹಾಗೂ ಸತ್ಯಾಶ್ರಯನ ಚರಿತ್ರೆಯನ್ನು ಸಮರ್ಪಕವಾಗಿ ತಿಳಿಯಲು ರನ್ನಕವಿಯ ಸಾಹಸಭೀಮವಿಜಯ ಕೂಡ ಅಮೂಲ್ಯವಾದ ಆಕರವಾಗಿದೆಯೆಂಬುದೂ ಆ ಕಾಲದ ಚಾರಿತ್ರಿಕ ಸಂಗತಿಗಳು ಸರಿಯಾಗಿ ತಿಳಿದುಬಂದಂತೆಲ್ಲ ಆ ಕಾವ್ಯ ಹೆಚ್ಚು ಆರ್ಥಪೂರ್ಣವಾಗಿ ತೋರುವುದೆಂಬುದೂ ಇಲ್ಲಿ ನೆನೆಯತಕ್ಕದ್ದಾಗಿದೆ. 
(ನೋಡಿ- ಚಾಳುಕ್ಯ)
(ನೋಡಿ- ರನ್ನ)
(ಟಿ.ವಿ.ವಿ.)

[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]